ಮಹೇಶ್ವರ
ಮಧ್ಯಪ್ರದೇಶದ ನರ್ಮದಾನದೀತೀರದಲ್ಲಿರುವ ಒಂದು ತೀರ್ಥಕ್ಷೇತ್ರ. ಇಂದೂರಿನಿಂದ 90 ಕಿಮೀ. ದೂರದಲ್ಲಿದೆ. ಪ್ರಾಚೀನ ಕಾಲದಲ್ಲಿ ಇದಕ್ಕೆ ಮಾಹಿಷ್ಮತಿ ಎಂದು ಹೆಸರಿದ್ದಿತು. ವಿಂಧ್ಯ ಹಾಗೂ ಋಕ್ಷ ಪರ್ವತಗಳ ಮಧ್ಯ ಇದೆ. ವಿಷ್ಣು ಪುರಾಣ, ಮತ್ಸ್ಯಪುರಾಣ ಇತ್ಯಾದಿಗಳ ಪ್ರಕಾರ ಹೈಹಯವಂಶದ ರಾಜ 'ಮಿನಿಷ್ಮಾನ್ ಈ ನಗರವನ್ನು ನಿರ್ಮಿಸಿದ ಎನ್ನಲಾಗಿದೆ. ಇದು ಆ ವಂಶದ ಕಾರ್ತವೀರ್ಯ ಇಲ್ಲವೇ ಸಹಸ್ರಾರ್ಜುನ ಎಂದು ಪ್ರಸಿದ್ಧನಾದ ರಾಜನಿಗೆ ರಾಜಧಾನಿಯಾಗಿತ್ತು. ಇಲ್ಲಿ ಕೆಲಕಾಲ ನಾಗರ ರಾಜ್ಯವಿದ್ದಿತ್ತೆಂದೂ ಹೇಳಲಾಗುತ್ತದೆ. ಹರಿವಂಶದ ಪ್ರಕಾರ ಇಕ್ಷ್ವಾಕು ವಂಶದ ಮಾಂಧಾತರಾಜನ ಪುತ್ರ ಮುಚಕುಂದ ಈ ನಗರವನ್ನು ನಿರ್ಮಿಸಿದ ಎನ್ನಲಾಗಿದೆ. ಮಹೇಶ್ವರ ನಗರದ ಹತ್ತಿರ 'ಸಹಸ್ರಧಾರ ಎಂಬ ಪ್ರೇಕ್ಷಣೀಯ ಸ್ಥಳವಿದೆ. ನರ್ಮದೆ ಇಲ್ಲಿ ಬಲು ರಮಣೀಯವಾಗಿ ಕಂಗೊಳಿಸುತ್ತದೆ. ಮಹೇಶ್ವರದ ಬಳಿಯಲ್ಲೇ ಮಹೇಶ್ವರಿ ನದಿಯ ಎಡಬಲದಲ್ಲಿ ಕಾಲೇಶ್ವರ ಹಾಗೂ ಜಾಲೇಶ್ವರ ದೇವಸ್ಥಾನಗಳಿವೆ. ನಗರದ ಪಶ್ಚಿಮದಲ್ಲಿ ಮತಂಗ ಮುನಿಯ ಆಶ್ರಮ ಹಾಗೂ ಮತಂಗೇಶ್ವರ ದೇವಸ್ಥಾನ ಇವೆ.  ಮಹೇಶ್ವರದ ಸೀರೆಗಳೂ ಪ್ರಸಿದ್ಧ.

ಮಹೇಶ್ವರವನ್ನು ಅಹಲ್ಯಾಬಾಯಿ ಹೋಳ್ಕರ್ ತನ್ನ ರಾಜಧಾನಿಯಾಗಿ ಮಾಡಿಕೊಂಡದ್ದರಿಂದ ಇದರ ವೈಭವ ಆ ಕಾಲಕ್ಕೆ ಇನ್ನಷ್ಟು ಮೇಲೇರಿತ್ತು. ಆಕೆ ಕಟ್ಟಿಸಿದ ಘಟ್ಟ, ಮಂದಿರ, ಸಂಸ್ಕøತ ಪಾಠಶಾಲೆ ಪ್ರಸಿದ್ಧವಾಗಿವೆ. ಮಾಹಿಷ್ಮತಿಗೆ ಕರ್ನಾಟಕದ ಇತಿಹಾಸದಲ್ಲೊಂದು ವಿಶಿಷ್ಟ ಸ್ಥಾನವಿದೆ. ಗುಲ್ಬರ್ಗಾ, ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾನದಿಯ ಎಡಬಲದ ಪ್ರದೇಶವನ್ನು ಆಳುತ್ತಿದ್ದ ಹೈಹಯ ರಾಜ ಮನೆತನದವರು ತಮ್ಮನ್ನು ಮಾಹಿಷ್ಮತಿಪುರವರಾಧೀಶ್ವರರೆಂದು ಶಾಸಗಳಲ್ಲಿ ಹೇಳಿಕೊಂಡಿದ್ದಾರೆ. ಇವರು ಕಲ್ಯಾಣದ ಚಾಳುಕ್ಯರ ಮತ್ತು ಅನಂತರ ಸೇಉಣರ ಸಾಮಂತರಾಗಿದ್ದರು. ಕನ್ನಡ ಜೈಮಿನಿಭಾರತದಲ್ಲಿ ಬಂದಿರುವ ಮಾಹಿಷ್ಮತಿಪುರವೂ ಇದೇ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ